PDIT paid tribute to Sir MV








ಸರ್ ಎಂ.ವಿ. ನಿರಂತರ ಸ್ಪೂರ್ತಿ
 -ಡಾ ಎಸ್‌ಎಂ ಶಶಿಧರ್


ಸರ್ ಎಂ ವಿಶ್ವೇಶ್ವರಯ್ಯನವರು ಎಂಜಿನಿಯರ್ ಗಳ ಸಮುದಾಯಕ್ಕೆ ನಿರಂತರ ಸ್ಫೂರ್ತಿಯಾಗಿದ್ದಾರೆ ಎಂದು ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಎಸ್‌ಎಂ ಶಶಿಧರ್ ಅವರು ಹೇಳಿದರು.

ಅವರು ಸರ್ ಎಂ ವಿಶ್ವೇಶ್ವರಯ್ಯ ನವರ ೧೫೯ ನೇ ಜನ್ಮದಿನಾಚರಣೆ ಹಾಗೂ ೫೨ನೇ ಎಂಜಿನಿಯರ್ಸ್ ದಿನಾಚರಣೆಯ ಸಂದರ್ಭದಲ್ಲಿ ಭಾನುವಾರದಂದು ಪಿಡಿಐಟಿ ಆವರಣದಲ್ಲಿ ವಿಶ್ವೇಶ್ವರಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಮೇರು ವ್ಯಕ್ತಿಯಾಗಿ ಬೆಳೆದ, ಬೆಳಗಿದ ಮತ್ತು ಜನರ ಬಾಳು ಬೆಳಗಿಸಿದ ಸರ್ ಎಂ.ವಿ. ಅವರು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಅವರದು ಬೆಲೆ ಕಟ್ಟಲಾಗದ ಸಾಧನೆ ಮತ್ತು ಅವರ ದೂರಗಾಮಿ ಯೋಜನೆಗಳು ಇಂದಿಗೂ ಸಕಾಲಿಕವಾಗಿರುವುದು, ಅವರ ಯೋಜನೆ-ಯೋಚನೆಗಳು ಸಮಯದ ಪ್ರವಾಹದಲ್ಲಿ ಎಷ್ಟೊಂದು ದೂರ ತಲುಪಿದೆ ಎಂಬುದಕ್ಕೆ ನಿದರ್ಶನ.

ಸುತ್ತಲೂ ಒಮ್ಮೆ ಕಣ್ಣು ಹಾಯಿಸಿ ನೋಡಿದರೆ ಅಸಂಖ್ಯಾತ ತಾಂತ್ರಿಕ ಆವಿಷ್ಕಾರಗಳು ನಮ್ಮನ್ನು ಸುತ್ತುವರೆದಿವೆ. ಮಾನವ ಬದುಕನ್ನು ಹಿತಕರಗೊಳಿಸಲು ತನ್ನ ಬುದ್ಧಿಮತ್ತೆಯಿಂದ ನಾವಿನ್ಯತೆಗಳನ್ನು, ಅವಿಷ್ಕಾರಗಳನ್ನು ರೂಪಿಸುವವನೇ ಎಂಜಿನಿಯರ್. ಎಂಜಿನಿಯರ್ ರೂಪಿಸುವ ಸಾಧನಗಳು ಮನುಕುಲದ ಜೀವನ ಸುಧಾರಣೆಯನ್ನು ಕೇಂದ್ರೀಕರಿಸಿಕೊಂಡಿವೆ. ಎಂಜಿನಿಯರ್ ಇಲ್ಲದ ಜಗತ್ತು ಚಕ್ರಗಳಿಲ್ಲದ ಬೈಕ್‌ನಂತೆ ಎಂದು ಅವರು ಹೇಳಿದರು.

ರಾಷ್ಟ್ರದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ. ಎಂಜಿನಿಯರ್‌ಗಳು ದೇಶದ ಸಾಮಾಜಿಕ ಬದಲಾವಣೆ, ಅರ್ಥಿಕ ಅಭಿವೃದ್ಧಿ, ಯೋಜನೆಗಳ ಅನುಷ್ಟಾನದಲ್ಲಿ ಗುರುತರ ಪಾತ್ರ ವಹಿಸುತ್ತಾರೆ. ಎಂಜಿನಿಯರ್‌ಗಳು ದೇಶದ ಪರಿವರ್ತನೆಯ ಹರಿಕಾರರಾಗಬೇಕು ಎಂದು ಎಂಜಿನಿಯರ್‌ಗಳ ಸಮುದಾಯಕ್ಕೆ ಕರೆ ನೀಡಿದರು.

ಪಿಡಿಐಟಿಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಶಿವಕೇಶವಕುಮಾರ್, ಡಾ.ಬಿಎಚ್ ಮಂಜುನಾಥ್, ಡಾ.ನಾಗರಾಜ್ ಮಾಲತೇಶ್ ಕಮತರ್, ಉದಯಶಂಕರ್ ಮುಂತಾದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.