ಹೊಸಪೇಟೆ 13 ಡಿಸೆಂಬರ್ 2018
ಪಿಡಿಐಟಿಯಲ್ಲಿ ವಿಶೇಷ ಉಪನ್ಯಾಸ
“ಉದ್ಯೋಗ ಮಾರುಕಟ್ಟೆಗೆ ಬೇಕಾದ ವೃತ್ತಿ ಕೌಶಲ್ಯ ಗಳಿಸಿರಿ”
ತಾಂತ್ರಿಕ ವಿದ್ಯಾರ್ಥಿಗಳಿಗೆ ಲೇಖಕ ಪ್ರಸಾದ್ ನಾಯ್ಕ್ ಕರೆ
“ತಾಂತ್ರಿಕ ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನಕ್ಕಿಂತ ವೃತ್ತಿಕೌಶಲ್ಯ ಬಹುಮುಖ್ಯ; ಪ್ರಸಕ್ತ ಉದ್ಯೋಗ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯವಾದ ವೃತ್ತಿ ಕೌಶಲ್ಯಗಳನ್ನು ಗಳಿಸಿರಿ” ಎಂದು ನವದೆಹಲಿಯ ಕೇಂದ್ರ ನಿರಾವರಿ ಇಲಾಖೆಯ ಎಂಜಿನಿಯರ್ ಹಾಗೂ ಕನ್ನಡದ ಖ್ಯಾತ ಅಂಕಣಕಾರ ಹಾಗೂ ‘ಹಾಯ್ಅಂಗೋಲ!’ ಪ್ರವಾಸ ಕಥನ ಕೃತಿಯ ಲೇಖಕ ಪ್ರಸಾದ್ ನಾಯ್ಕ್ ತಾಂತ್ರಿಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಂಗಳವಾರ ಮಧ್ಯಾಹ್ನ ’ತಾಂತ್ರಿಕ ವಿದ್ಯಾರ್ಥಿಗಳಿಗೆ ಅವಶ್ಯ ಕೌಶಲ್ಯಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
“ತಂತ್ರಜ್ಞಾನ ಹಾಗೂ ಉದ್ಯಮಗಳು ನಿರಂತರ ಬದಲಾಗುತ್ತಲೇ ಇರುತ್ತವೆ; ಉದ್ಯೋಗ ಮಾರುಕಟ್ಟೆಯ ನಿರೀಕ್ಷೆಗಳೂ ಬದಲಾಗುತ್ತಿರುತ್ತವೆ. ಬದಲಾಗುವ ಸನ್ನಿವೇಶಕ್ಕೆ ಹಾಗೂ ಉದ್ಯೋಗ ಸಂಸ್ಕೃತಿಗೆ ನಿರಂತರ ಹೊಂದಿಕೊಳ್ಳುವ ತುಡಿತ, ಇದುಸಾಮರ್ಥ್ಯ ಮತ್ತು ಮನಸ್ಥಿತಿಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ” ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಕೌಶಲ್ಯ ಗಳಿಕೆ ಒಂದು ನಿರಂತರ ಪ್ರಕ್ರಿಯೆಯೇ ಹೊರತು ಗಮ್ಯವಲ್ಲ. ರಾತ್ರೋರಾತ್ರಿಯಲ್ಲಿ ಕೌಶಲ್ಯ ಗಳಿಸುವುದು ಸಾಧ್ಯವಿಲ್ಲ. ಕೌಶಲ್ಯ ಗಳಿಸಲು ಸಮಯ, ಶ್ರದ್ಧೆ, ಸಮರ್ಪಣಾ ಮನೋಭಾವ ಇರಬೇಕು ಎಂದು ಪ್ರಸಾದ್ ನಾಯಕ್ ಹೇಳಿದರು. ತಾಂತ್ರಿಕ ವಿದ್ಯಾರ್ಥಿಗಳು ಭಾಷಾ ಪರಿಣತಿಯನ್ನು ನಿರ್ಲಕ್ಷಿಸಬಾರದು. ಭಾಷೆ ಹಾಗೂ ಸಂಹವನ ಕೌಶಲ್ಯಗಳು ಇಂದಿನ ಕಾರ್ಪೋರೇಟ್ ಹಾಗೂ ಸರ್ಕಾರಿ ವಲಯಗಳಲ್ಲಿ ಬಹು ಮುಖ್ಯವಾಗಿದೆ ಎಂದು ಪ್ರಸಾದ್ ನಾಯಕ್ ಅಭಿಪ್ರಾಯಪಟ್ಟರು.
“ಸರ್ಕಾರಿ ಕೆಲಸವೆಂದರೆ ಸುಲಭ ಹಾಗೂ ಅಲ್ಲಿ ಹೆಚ್ಚಿನ ಕಾರ್ಯಭಾರ, ಕೆಲಸದ ಒತ್ತಡ,ಗಡುವುಗಳ ಜಂಜಡ ಇರುವುದಿಲ್ಲ ಎಂದು ಅನೇಕರು ಪರಿಭಾವಿಸುತ್ತಾರೆ. ಆದರೆ ಸರ್ಕಾರಿ ವಲಯದಲ್ಲಿಯೂ ಕಾರ್ಪೊರೇಟ್ ಉದ್ಯೋಗ ಕ್ಷೇತ್ರದ ಸಂಸ್ಕೃತಿ ಕಾಲಿಟ್ಟಿದೆ. ಕನಸಿನ ಉದ್ಯೋಗ ಎಂದು ಸರ್ಕಾರಿ ಉದ್ಯೋಗವನ್ನು ಅರಸಿ ಬಂದವರು, ಕೆಲ ಕಾಲದಲ್ಲಿಯೇ ನಿರಾಶರಾಗಿರುವ ಅನೇಕ ಉದಾಹರಣೆಗಳಿವೆ. ನಿಮ್ಮ ಕನಸಿನ ಉದ್ಯೋಗ ವಾಸ್ತವದಲ್ಲಿ ನೀವು ಅಂದುಕೊಂಡದ್ದಕ್ಕಿಂತ ಬೇರೆಯೇ ಆಗಿರಬಹುದು ಎಂಬ ಎಚ್ಚರವಿರಲಿ” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಂತ್ರಿಕ ಪದವಿ ಪಡೆದು ಹೊಸದಾಗಿ ವೃತ್ತಿಗೆ ಪದಾರ್ಪಣೆ ಮಾಡುವ ವಿದ್ಯಾರ್ಥಿಗಳು ಎದುರಿಸುವ ಸವಾಲುಗಳ ಕುರಿತು ಚರ್ಚಿಸಿದ ಅವರು ಅವುಗಳನ್ನು ನಿರ್ವಹಿಸುವ ಬಗೆಗಳನ್ನು ವಿವರಿಸಿದರು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಎಂ.ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ “ತಂತ್ರಜ್ಞಾನ ಕ್ಷೇತ್ರವು ಸೃಜನಶೀಲ ಕ್ಷೇತ್ರವಾಗಿದೆ. ಯಶಸ್ವೀ ವೃತ್ತಿಜೀವನವನ್ನು ಹೊಂದಲು ಅವಿಷ್ಕಾರ ಮನೋಭಾವ ಮತ್ತು ಸವಾಲುಗಳನ್ನು ನಿಭಾಯಿಸುವ ವಿಶ್ವಾಸ ಗಳಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶಿವಕೇಶವ ಕುಮಾರ್ ಆರಂಭದಲ್ಲಿ ಸ್ವಾಗತಿಸಿದರು ಪ್ರಾಧ್ಯಾಪಕ ಡಾ.ನಿಜಲಿಂಗಪ್ಪ ವಂದನಾರ್ಪಣೆ ಸಲ್ಲಿಸಿದರು.