ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಕ್ಕೆ ಚಾಲನೆ


ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ
ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಕ್ಕೆ ಚಾಲನೆ
ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗು ನಾಯಕತ್ವದ ಗುಣಗಳು ಬೆಳೆಯುತ್ತವೆ
-ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್
ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗು ನಾಯಕತ್ವದ ಗುಣಗಳು ಬೆಳೆಯುತ್ತವೆ. ಎಂದು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್ ಅಭಿಪ್ರಾಯಪಟ್ಟರು.
ಅವರು ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಪಿಡಿಐಟಿಯು ಹಮ್ಮಿಕೊಂಡಿರುವ ವಿದ್ಯಾರ್ಥಿಗಳ ಒಂದು ವಾರದ  ವಿಶೇಷ  ಶಿಬಿರಕ್ಕೆ ದಿ.೩೦ರಂದು ಭಾನುವಾರ ಚಾಲನೆ ನೀಡಿ ಮಾತನಾಡುತ್ತಿದ್ದರು.
ತಾಂತ್ರಿಕ ವಿದ್ಯಾರ್ಥಿಗಳು ಕೇವಲ ನಗರವಾಸಕ್ಕೆ ಸೀಮಿತಗೊಳ್ಳದೆ, ‘ಮರಳಿ ಹಳ್ಳಿಗೆ’ ಎಂಬ ಗಾಂಧೀಜಿಯವರ ಕರೆಯಂತೆ ಹಳ್ಳಿಗಳತ್ತ ಮುಖ ಮಾಡಬೇಕಾಗಿದೆ. ತಾಂತ್ರಿಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಈ ಶಿಬಿರಗಳಲ್ಲಿ ಭಾಗವಹಿಸುವುದರಿಂದ  ವಿಶಿಷ್ಟ ಅನುಭವ ಪಡೆಯಬಹುದು. ಗ್ರಾಮೀಣ ಜನರ ಕಷ್ಟ-ಸುಖ ಅರಿಯುವ, ಸ್ಪಂದಿಸುವ ಹಾಗೂ ತಂತ್ರಜ್ಞಾನದ ಮೂಲಕ ಅವರ ಬದುಕಿಗೆ ಅಸರೆಯಾಗುವತ್ತ ವಿದ್ಯಾರ್ಥಿಗಳು ಚಿಂತಿಸಬೇಕು. ಅಂತಹ ಅವಕಾಶ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಒದಗಿಸಿ ವಿದ್ಯಾರ್ಥಿಗಳನ್ನು ಸಮಾಜಮುಖಿಗಳನ್ನಾಗಿಸುವುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬುಕ್ಕಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶ್ರೀಶೈಲ ಗೌಡ ಮಾತನಾಡಿ ಸೇವೆ ಒಂದು ಮಹತ್ವದ ಕಾರ್ಯ. ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ತಮ್ಮದೇ ಆದ ಮಹತ್ವ ಪಡೆದು ಕೊಂಡಿದ್ದು, ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸುತ್ತವೆ. ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ಅಭಿಪ್ರಾಯ ಪಟ್ಟರು.
ಆರಂಭದಲ್ಲಿ ಬುಕ್ಕಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಲ್ಲಿಪುರ ತಿಮ್ಮಪ್ಪ ಅವರು ರಾಷ್ಟ್ರೀಯ ಸೇವಾ ಯೋಜನೆಯ ಧ್ವಜಾರೋಹಣ ಮಾಡಿದರು. ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್ ಪ್ರತಿಜ್ಞಾವಿಧಿ ಬೋಧಿಸಿದರು. ತಾ. ಪಂ. ಸದಸ್ಯೆ ಮಲ್ಯ ಹನುಮಕ್ಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿ.ಹನುಮಕ್ಕ, ಸದಸ್ಯರಾದ ಎಚ್. ಗುರಪ್ಪ, ಶಿವಕುಮಾರ, ಎನ್. ಎಸ್. ಎಸ್. ಸಂಯೋಜನಾಧಿಕಾರಿ ಆರ್.ನವೀನ್, ಪಿಡಿಐಟಿಯ ಅಧ್ಯಾಪಕರಾದ ಪ್ರತಾಪ್ ಕುಲಕರ್ಣಿ, ಎಸ್.ಎಚ್.ಮಂಜುನಾಥ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ‘ಸ್ವಚ್ಚ ಗ್ರಾಮ’ ಕಾರ್ಯಕ್ರಮದಲ್ಲಿ ೫೦ ಕ್ಕೂಹೆಚ್ಚು ವಿದ್ಯಾರ್ಥಿಗಳು ಗ್ರಾಮದ ರಸ್ತೆಗಳನ್ನು ಸ್ವಚ್ಚಗೊಳಿಸಿದರು. ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ವಿಂಗಡಣೆ ಸೇರಿ ಮನೆಗಳ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮತ್ತು ಪರಿಸರ ರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.