ಬಿ.ಆರ್. ಲಕ್ಷ್ಮಣ್‌ರಾವ್ ಅವರ ಅನುಭಾವ ತುಂಬಿದ ಈ ಗೀತೆಯನ್ನು ಮಿತ್ರ ವೃಷಭೇಂದ್ರ ಗೌಡನೊಂದಿಗೆ ಆರೇಳು ಸಲ ಆಲಿಸಿ, ಇದರ ಗುಂಗಿನಿಂದ ಹೊರಬರಲಾಗದೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ!
ತಪ್ಪದೇ ಒದಿ!
ಕವಿತೆಯ ಲಯ, ಓಘ, ಪ್ರಾಸ, ಶಬ್ದಗಳ ಚಮತ್ಕಾರ ಗಮನಿಸಿ!!!
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು! |ಪ|
ತೋಳಕೊಂದು ಕುರಿಯ ಕೊಟ್ಟೆ, ಸಿಂಹಕೆಂದು ಜಿಂಕೆಯಿಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು |1|
ತುಳಿತಕೆ ನೀ ತಿಮಿರು ಕೊಟ್ಟೆ, ದುಡಿತಕೆ ಬರಿ ಬೆಮರು ಕೊಟ್ಟೆ
ಕವಿಗೆ ನುಡಿಯ ಡಮರು ಕೊಟ್ಟೆ ಬಡಿದು ದಣಿಯಲು |2|
ನರನಿಗೆಂದೆ ನಗೆಯ ಕೊಟ್ಟೆ, ನಗೆಯೊಳು ಹಲ ಬಗೆಯನಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು |3|
ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ
ಸತ್ವಕೆ ಷಂಡತ್ವ ಕೊಟ್ಟೆ ತತ್ವ ಗೊಣಗಲು |4|
ಏರಲೊಂದು ಏಣಿ ಕೊಟ್ಟೆ, ಕಚ್ಚಲೊಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು |5|
ಕೈಯ ಕೊಟ್ಟೆ ಕೆಡವಲೆಂದು, ಕಾಲು ಕೊಟ್ಟೆ ಎಡವಲೆಂದು
ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗಳೆಯಲು |6|
ದೇವರೇ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳವಳೆಯಲು |ಪ|