ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಭಾಷಣ ಕೇಳಿದ ಬಳಿಕ ಅಮೆರಿಕದ ಪ್ರಮುಖ ಪತ್ರಿಕೆ ಹೀಗೆ ಬರೆಯಿತು. ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಠ ವ್ಯಕ್ತಿ. ಅವರ ಭಾಷಣ ಕೇಳಿದ ಬಳಿಕ ಇಂತಹ ಸುಸಂಸ್ಕೃತರ ದೇಶಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳುಹಿಸುವುದು ಮೂರ್ಖತನವಾದೀತು.’’ ಸ್ವಾಮೀಜಿ ಅವರ ಭಾಷಣ ಭಾರತದ ಮೇಲೆ ಇಡೀ ವಿಶ್ವ ಸಮುದಾಯಕ್ಕಿದ್ದ ತಪ್ಪು ಕಲ್ಪನೆಗಳನ್ನು ದೂರ ಮಾಡಿತು. ಇಡೀ ವಿಶ್ವವೇ ಭಾರತದತ್ತ ಗೌರವದಿಂದ ನೋಡುವಂತೆ ಮಾಡಿತು. ಭಾರತದ ಬಗ್ಗೆ ವಿಶ್ವಕ್ಕೇ ಗೌರವ ಮೂಡಿಸಿದ ಆ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೇ?
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗೆ ಮಿಗಿಲಾದದ್ದು ಯಾವುದೂ ಇಲ್ಲ. ನನಗೆ ೧೦೦ಜನ ಗಟ್ಟಿ ಮುಟ್ಟಾದ ಚೈತನ್ಯ ಸ್ವರೂಪರಾದ ಯುವಕರನ್ನು ಕೊಡಿ ನಾವು ನವಭಾರತದ ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಸ್ವಾಮೀಜಿ.
ಯುವಕರು ಹೇಡಿಗಳಾಗಬಾರದು ಪುರುಷ ಸಿಂಹಗಳಾಗಬೇಕು, ನೀವು ಎಂದೂ ಪರಾವಲಂಬಿಗಳಾಗಬಾರದು, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಪ್ರತಿಪಾದಿಸುತ್ತಿದ್ದ ಸ್ವಾಮೀಜಿ ಅವರು ಯುವಜನರಿಗೆ ನೀಡಿರುವ ಒಂದೊಂದು ಸಂದೇಶವೂ ಒಂದೊಂದು ಜೀವನ ಧರ್ಮವಾಗಿದೆ.
ಹೀಗಾಗಿಯೇ ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ, ಅಕ್ಷರಶಃ ರೋಮಾಂಚನವಾಗುತ್ತದೆ. ವಿವೇಕವಾಣಿಯನ್ನು ಕೇಳುತ್ತಿದ್ದರೆ, ವಿವೇಕಾನಂದರ ಸಂದೇಶಗಳನ್ನು ಓದುತ್ತಿದ್ದರೆ, ಮೈ ಪುಳಕಿತವಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ತನುವಿನಲ್ಲಿ ಹೊಸ ಚೈತನ್ಯ ಒಡಮೂಡುತ್ತದೆ. ಇಂಥ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಓದಿದರೆ ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ ಮೂಡುವುದರ ಜೊತೆಗೆ ಸ್ವಾವಲಂಬನೆಯ, ಆತ್ಮಾಭಿಮಾನದ ಸಾಕ್ಷಾತ್ಕಾರವಾಗುತ್ತದೆ. ನಿಮ್ಮ ಜೀವನದ ಶಿಲ್ಪಿಗಳು ನೀವಾಗಬೇಕೆಂದರೆ, ಅಖಂಡ ಭಾರತದ ಪರಿಕಲ್ಪನೆಗಾಗಿ ವಿವೇಕಾನಂದರನ್ನೊಮ್ಮೆ ಓದಿ. ಅದುವೇ ನಿಮಗೊಂದು ದಿನವನ್ನು ಕಟ್ಟಿಕೊಟ್ಟ ಮಹಾಪುರುಷನಿಗೆ ನೀವು ನೀಡುವ ಅಪೂರ್ವ ಸಮರ್ಪಣೆ.