ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಂಭ್ರಮದ ರಾಜ್ಯೋತ್ಸವ

“ನಾವು  ಭಾವನಾತ್ಮವಾಗಿ ಕನ್ನಡಿಗರಾಬೇಕು”
-ಡಾ|| ಚಂದ್ರಶೇಖರ ಶಾಸ್ತ್ರಿ

ಹೊಸಪೇಟೆ   1.11.2014

  “ಭೌಗೋಳಿಕವಾಗಿ ಕನ್ನಡಿಗರಾಗಿದ್ದರೆ ಸಾಲದು, ಭಾವನಾತ್ಮಕವಾಗಿ ನಾವು ಕನ್ನಡಿಗರಾಗಬೇಕು. ಆಗ ಮಾತ್ರ ಕನ್ನಡ ನಾಡು ನುಡಿಯ ಸಂರಕ್ಷಣೆ ಸಾಧ್ಯ” ಎಂದು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ|| ಚಂದ್ರಶೇಖರ ಶಾಸ್ತ್ರಿಯವರು ಹೇಳಿದರು.

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ  ಮಹಾವಿದ್ಯಾಲಯದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

‘ಕನ್ನಡಕ್ಕಾಗಿ ಕೈಯೆತ್ತು’ ಎಂಬ ಘೋಷವಾಕ್ಯ ಹಳೆಯದಾಯಿತು, ಈಗ ‘ಕನ್ನಡಕ್ಕಾಗಿ ಧ್ವನಿಯೆತು’್ತ ಎಂದು ಹೇಳಬೇಕಾಗಿದೆ. ಹಿಂದಿನ ಕಾಲದಲ್ಲಿ ಪರರಾಜ್ಯಗಳನ್ನು ವಶಪಡಿಸಿಕೊಳ್ಳಲು ಸೈನಿಕರನ್ನು ಕಳಿಸಲಾಗುತ್ತಿತ್ತು, ಈಗ ಭಾಷೆಯ ಮೂಲಕ ಪರರಾಜ್ಯಗಳನ್ನು ಆಕ್ರಮಿಸುವ, ಅಲ್ಲಿನ ಸಂಸ್ಕøತಿಯ ಮೇಲೆ ಅಧಿಪತ್ಯ ಸಾಧಿಸುವ ಹುನ್ನಾರಗಳನ್ನು ಕಾಣುತ್ತಿದ್ದೇವೆ. ಕನ್ನಡಿಗರು ನಿರಭಿಮಾನಿಗಳಾಗದೆ, ಕೀಳರಿಮೆ ತೊಡೆದು ಕನ್ನಡವನ್ನು ಬಳಸುವ-ಬೆಳೆಸುವ ಸಂಕಲ್ಪ ಮಾಡಬೇಕೆಂದು ಡಾ|| ಚಂದ್ರಶೇಖರ ಶಾಸ್ತ್ರಿ ಹೇಳಿದರು.

ಪ್ರೌಢದೇವರಾಯ ತಾಂತ್ರಿಕ  ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಎಸ್.ಎಂ.ಶಶಿಧರ್ ಕನ್ನಡವನ್ನು ಬೆಳೆಸುವುದು ಕೇವಲ ಕನ್ನಡ ಅಧ್ಯಾಪಕರ, ಸಾಹಿತಿಗಳ ಕೆಲಸವೆಂದು ಭಾವಿಸಬಾರದು. ಎಲ್ಲಾ ವೃತ್ತಿಗಳಲ್ಲೂ, ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಬಳೆಸಿದಾಗ ಭಾಷೆ ಸಂಮೃದ್ಧವಾಗಿ ಬೆಳೆಯುತ್ತದೆ ಎಂದು ಹೇಳಿದರು

ಅಧ್ಯಾಪಕ ಪ್ರೊ.ಸುರೇಶ್ ಪಾಟೀಲ್‍ರವರು ಕನ್ನಡಿಗರ ಸಾಧನೆಗಳನ್ನು ವಿವರಿಸಿ, ಕನ್ನಡದ ಶ್ರೇಷ್ಠತೆಯ ಬಗ್ಗೆ  ವಿದ್ಯಾರ್ಥಿಗಳು ಅರಿತಲ್ಲಿ,  ಕನ್ನಡ ನಾಡು-ನುಡಿಗಳ ಬಗ್ಗೆ ಪ್ರೀತಿ ಅಭಿಮಾನ ಮೂಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಹಿಂದಿನ ವಾರ್ಡನ್ ಡಾ|| ಜೆ.ನಿಜಲಿಂಗಪ್ಪರವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಸಂಜಯ್, ಸ್ವಾಗತವನ್ನು ಸಂಪತ್ ಕುಮಾರ್ ಮತ್ತು ವಂದನಾರ್ಪಣೆಯನ್ನು ಮಹೇಶ್  ಕೊಪ್ಪದ್ ಮಾಡಿದರು.