ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆ ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡರೆ ರಾಷ್ಟ್ರವು ಪ್ರಗತಿ ಹೊಂದಲು ಸಾಧ್ಯ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ಪೊ. ಎಸ್. ಎಂ. ಶಶಿಧರ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಮತ್ತು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಅನೇಕ ಕುತೂಹಲ ಮತ್ತು ವಿಸ್ಮಯಗಳ ಆಗರ. ವಿದ್ಯಾರ್ಥಿಗಳು ಪ್ರತಿಯೊಂದು ವಿದ್ಯಮಾನವನ್ನು ಪ್ರಶ್ನಿಸಿ ವಿಮರ್ಶಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡು, ದೇಶವನ್ನು ಕಾಡುತ್ತಿರುವ ಮೌಢ್ಯಗಳ ವಿರುದ್ಧ ಪ್ರಬಲ ಧ್ವನಿ ಎತ್ತಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರದ ಯುವ ವಿಜ್ಞಾನಿ ಬಿ ಹೆಚ್ ಎಂ. ದಾರುಕೇಶ ಭಾರತದ ಅಂತರಿಕ್ಷ ಸಂಶೋಧನೆಗಳನ್ನು ಕುರಿತು ಮಾತನಾಡಿ ನಮಗೆ ಇರುವ ಒಂದೇ ಭೂಮಿಯನ್ನು ಕಾಪಾಡಿಕೊಳ್ಳದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಇವರು ವಿಶ್ವವು ರೂಪುಗೊಂಡ ಬಗೆ, ಅದರ ವಿಕಸನವನ್ನು ಸಾಕ್ಷ್ಯಚಿತ್ರಗಳ ನೆರವಿನೊಂದಿಗೆ ವಿವರಿಸಿದರು.
ವನ್ಯಜೀವಿ ಸಂಶೋಧಕರಾದ ಕೆ.ಎಸ್. ಅಬ್ದುಲ್ ಸಮದ್ ಮಾತನಾಡಿ ಅಪರೂಪದ ಪ್ರಾಣಿ ಮತ್ತು ಪಕ್ಷಿಸಂಕುಲಗಳು ಮೂಢನಂಬಿಕೆಗಳ ಆಚರಣೆಯಿಂದಾಗಿ ಅವನತಿ ಹೊಂದುತ್ತಿವೆ ಎಂದು ವಿಷಾದಿಸಿದರಲ್ಲದೇ, ಮೂಢನಂಬಿಕೆ ನಿಷೇಧ ಕಾನೂನಿಗೆ ನಾಡಿನ ಪ್ರಜ್ಞಾವಂತರು ಬೆಂಬಲಿಸುವುದು ವರ್ತಮಾನದ ಅಗತ್ಯವಾಗಿದೆ ಎಂದರು.
ಇನ್ನೊಬ್ಬ ಅತಿಥಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಟಿ.ಹೆಚ್.ಎಂ. ದಾರುಕಾಸ್ವಾಮಿ ಅವರು ಸರ್ ಸಿ.ವಿ.ರಾಮನ್ ಅವರ ಕೊಡುಗೆಗಳನ್ನು ಕುರಿತು ಮಾತನಾಡಿದರಲ್ಲದೇ ಅವರ ಕುರಿತಾದ ಸಾಕ್ಷಚಿತ್ರವನ್ನು ಪ್ರದರ್ಶಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಡಾ.ಬಿ.ಗೋವಿಂದರಾಜು ಅವರು ಮಾತನಾಡಿ ವಿಜ್ಞಾನದ ತಿಳುವಳಿಕೆ ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ಪನ್ನಂಗಧರ ವಹಿಸಿ ವಿದ್ಯಾರ್ಥಿಗಳು ಪಠ್ಯಕ್ಕಷ್ಟೇ ಸೀಮಿತವಾಗದೇ ವಿಶ್ವದ ವಿಶಾಲಜ್ಞಾನವನ್ನು ಓದುವುದರ ಮೂಲಕ ಅರಿಯುವ ಪ್ರಯತ್ನಕ್ಕೆ ಮುಂದಾಗಲಿ ಎಂದರು.
ಕಾರ್ಯಕ್ರಮದ ಅಂಗವಾಗಿ ಜರುಗಿದ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಪುಸ್ತಕ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಯಿತು ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವೈಜ್ಞಾನಿಕ ಮನೋಭಾವವನ್ನು ಪ್ರೋತ್ಸಾಹಿಸುವ ಕಿರುಚಿತ್ರಗಳು ವಿದ್ಯಾರ್ಥಿಗಳ ಗಮನ ಸೆಳೆದವು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ.ಬಿ.ಜಿ.ಕನಕೇಶಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾವೀನ್ಯ ಕೂಟದ ಸಂಚಾಲಕ ಹಾಗೂ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದ ಸಮನ್ವಯಾಧಿಕಾರಿ ಡಾ.ಕೆ.ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು ಮತ್ತು ರಾಷ್ಟ್ರೀಯ ಸೇವಾಯೋಜನಾಧಿಕಾರಿ ಟಿ.ಹೆಚ್.ಬಸವರಾಜ ವಂದಿಸಿದರು.