ಗ್ರಾಮೀಣ ಕ್ರೀಡೆಗಳ ಉಳಿವಿಗೆ ಮುಂದಾದ ಪಿಡಿಐಟಿ ವಿದ್ಯಾರ್ಥಿಗಳು

SATURDAY, 21 FEBRUARY, 2015


ಹೊಸಪೇಟೆ: ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆ ನೂರೆಂಟು ದಾರಿ. ಹೀಗೆ ಗ್ರಾಮೀಣ ಮಕ್ಕಳ ಕ್ರೀಡೆ­ಗಳನ್ನು ಉಳಿಸುವ ನಿಟ್ಟಿನಲ್ಲಿ ಹೊಸಪೇಟೆ ಸ್ಥಳೀಯ ಪ್ರತಿಭೆಗಳು ನಿರ್ಮಿಸಿದ 15 ನಿಮಿಷದ ‘ಆಟ ಬೊಂಬಾಟ’ ಕಿರುಚಿತ್ರ ತೆರೆ ಕಾಣಲು ಸಿದ್ಧ­ವಾಗಿದೆ. ಸ್ಥಳೀಯ ಯುವ ಪ್ರತಿಭೆ­ಗಳೇ ನಿರ್ಮಿಸಿರುವ ಈ ಕಿರುಚಿತ್ರ ಇಷ್ಟರ­ಲ್ಲಿಯೇ ‘ಯು ಟ್ಯೂಬ್‌’ನಲ್ಲಿ ಹರಿದಾಡಲಿದೆ.   
ನಗರದ ಪ್ರೌಢ­ದೇವರಾಯ ಎಂಜಿನಿ­ಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ­ಗಳಾದ ಅನಿಲ್‌ಕುಮಾರ ಮತ್ತು ಕರಣ್‌ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಮೇಧಾ ಆರ್ಟ್ಸ್‌ ಈ ಕಿರುಚಿತ್ರವನ್ನು ನಿರ್ಮಿಸಿದೆ. ಅಲ್ಲದೆ ಇದಕ್ಕಾಗಿ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡಿರುವು ಒಂದು ವಿಶೇಷ.
ಆಧುನಿಕತೆಯ ಭರದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿರುವ ಇಂದಿನ ಮಕ್ಕಳು ಕಂಪ್ಯೂಟರ್‌ ಹಾಗೂ ಮೊಬೈಲ್‌ ಗೇಮ್‌ ಸೇರಿದಂತೆ ದೈಹಿಕ ಚಟುವಟಿಕೆಗಳಿಗೆ ಅವಕಾಶವೇ ಇಲ್ಲದಿ­ರುವ ಆಟಗಳಲ್ಲಿ ತೊಡಗಿ­ಕೊಂಡಿದ್ದಾರೆ. ಇದರಿಂದ ದೇಶೀ ಕ್ರೀಡೆ­ಗಳಿಗೆ ಅವಕಾಶ­ವಿರಲಿ ಪರಿಚಯವೇ ಇಲ್ಲದಂತಾಗಿದ್ದು, ಗ್ರಾಮೀಣ ಕ್ರೀಡೆ­ಗಳನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಈ ಕಿರುಚಿತ್ರದಲ್ಲಿ ಮೂಡಿ ಬಂದಿದೆ.
ಕಿರುಚಿತ್ರದಲ್ಲಿ ಲಗೋರಿ, ಚಿನ್ನಿ–ದಾಂಡು, ಗೋಲಿ, ಬುಗರಿ, ಮುಟ್ಟಾಟ, ಸರಬಡಿಗೆ ಆಟ ಸೇರಿ ಒಟ್ಟು ಗ್ರಾಮೀಣ ಮಕ್ಕಳ ಕ್ರೀಡೆಗಳ ಪರಿಚಯ ಹಾಗೂ ಆಡುವ ಬಗೆ ತಿಳಿಸಿಕೊಡಲಾಗಿದೆ. 
ಶಾಲೆಯಿಂದ ಬಂದ ಹುಡುಗನೊಬ್ಬ ಪುಸ್ತಕದ ಬ್ಯಾಗ್‌ ಎಸೆದು ಲ್ಯಾಪ್‌ ಟಾಪ್‌ ಹಿಡಿದು ಕಂಪ್ಯೂಟರ್‌ ಗೇಮ್ ಆಡುತ್ತಾ ಕುಳಿತುಕೊಳ್ಳುತ್ತಾನೆ. ಆಗ ತಂದೆ ಮಗನನ್ನು ಗದರಿಸಿ ಲ್ಯಾಪ್‌­ಟಾಪ್‌ ಕಸಿದು ಕಪಾಟಿನಲ್ಲಿ ಇಡು­ತ್ತಾರೆ. ಹುಡುಗ ಮತ್ತೆ ಲ್ಯಾಪ್‌­ಟಾಪ್‌ ತೆಗೆದುಕೊಳ್ಳಲು ಹೋದ ಸಂದರ್ಭ­­ ಆತನಿಗೆ ತಂದೆ ಚಿಕ್ಕ­ವಯಸ್ಸಿ­ನಲ್ಲಿ ಆಟ ಆಡುತ್ತಿದ್ದ ಫೋಟೊ­ಗಳ ಒಂದು ಆಲ್ಬಂ ಸಿಗುತ್ತದೆ.
ಆ ಆಲ್ಬಂನಲ್ಲಿ­ರುವ ಆಟದ ಫೋಟೊಗಳ ಬಗ್ಗೆ ಕುತೂಹಲ­­ದಿಂದ ಆತನ ತಂದೆಯ ಬಳಿಗೆ ಬರು­ತ್ತಾನೆ. ಆಗ ತಂದೆ ತಾನು ಚಿಕ್ಕವನಿದ್ದಾಗ ಆಡುತ್ತಿದ್ದ ಆಟಗಳ ಕುರಿತು ವಿವರಿಸುತ್ತಾ ಹೋಗು­ತ್ತಾರೆ. ಆಗ ಆ ಚಿತ್ರ­ಗಳನ್ನು ನೋಡು­ತ್ತಲೇ ಆ ಹುಡುಗನ ಅಭಿರುಚಿ ಬದ­ಲಾ­ಗುತ್ತಾ ಹೋಗುತ್ತದೆ. ಇದು ಈ ಕಿರು ಚಿತ್ರದ ಸಾರಾಂಶ.
‘ದೇಶೀ ಕ್ರೀಡೆಗಳನ್ನು ಮರೆಯುತ್ತಿ­ರುವ ಇಂದಿನ ಮಕ್ಕಳು ಕೇವಲ ಕಂಪ್ಯೂ­ಟರ್‌ ಆಟಗಳಲ್ಲಿ ಮಾತ್ರ ಆಸಕ್ತಿ ತೋರು­­ತ್ತಿ­ದ್ದಾರೆ. ಸೃಜನಾತ್ಮಕತೆಯಿಂದ ಕೂಡಿದ ಗ್ರಾಮೀಣ ಮಕ್ಕಳು ಕ್ರೀಡೆ­ಗಳನ್ನು ಮರೆಯುತ್ತಿದ್ದು, ಮುಂದೊಂದು ದಿನ ಇಂಥ ಆಟ ಇತ್ತು ಎಂದು ಹೇಳುವುದೂ ಕಷ್ಟವಾಗುವ ಆತಂಕ ಎದುರಾಗಿದೆ. ದೇಶೀ ಕ್ರೀಡೆ­ಗ­ಳನ್ನು ಉಳಿಸುವ ನಿಟ್ಟಿನಲ್ಲಿ ಅವು­ಗಳನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನ­ವನ್ನು ಈ ಕಿರುಚಿತ್ರದ ಮೂಲಕ ಮಾಡ­ಲಾಗಿದೆ’ ಎನ್ನುತ್ತಾರೆ ಅನಿಲ್‌­ಕುಮಾರ್‌.
ಕಂಪ್ಯೂಟರ್ ಆಟಗಳಿಂದ ದೇಶೀ ಕ್ರೀಡೆ­­ಯತ್ತ ಮಕ್ಕಳನ್ನು ಸೆಳೆಯುವಲ್ಲಿ ಹಾಗೂ ಅಳಿಸಿ ಹೋಗುತ್ತಿರುವ ಕ್ರೀಡೆ­ಗಳನ್ನು ಮುಂದಿನ ಪೀಳಿಗೆಗೆ ಕೊಂಡೊ­ಯ್ಯುವಲ್ಲಿ ಕಿರುಚಿತ್ರ ಒಂದು ದಿಟ್ಟ ಹೆಜ್ಜೆ­ಯಾಗಿದ್ದು, ಜನಪ್ರಿಯ­­ವಾಗುವ ವಿಶ್ವಾಸ ಚಿತ್ರತಂಡ­ದಲ್ಲಿ ಮನೆ ಮಾಡಿದೆ.
ಹೊಸಪೇಟೆಯ ಸುತ್ತಮುತ್ತಲಿನ ಪ್ರದೇಶವನ್ನೆ ಚಿತ್ರೀಕರಣಕ್ಕೆ ಆಯ್ದುಕೊ­ಳ್ಳ­­ಲಾ­ಗಿದ್ದು, ಹೊಸ­ಪೇಟೆಯ ಆ್ಯರೋಣ್‌ ಎಚ್. ಅವರ ಸಂಗೀತ ಕಿರು­ಚಿತ್ರಕ್ಕೆ ಜೀವ ತುಂಬಿದೆ. ಸ್ಥಳೀಯ ದೀಪಾಯನ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳ ಅಭಿನಯ ಚಿತ್ರಕ್ಕೆ ಶಕ್ತಿ ತುಂಬಿದೆ. ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅದೇ ಶಾಲೆಯ ದೈಹಿಕ ಶಿಕ್ಷಕ ಜಂಬುಕೇಶ್ವರ ಅಭಿನಯಿಸಿ­ದ್ದಾರೆ.
ಕಥೆ, ಚಿತ್ರಕಥೆ, ಕ್ಯಾಮೆರಾ ಹಾಗೂ ನಿರ್ದೇಶನ ಎಲ್ಲವನ್ನೂ ಅನಿಲ್‌­ಕುಮಾರ್‌ ಮತ್ತು ಕರಣ್‌ ನಿರ್ವಹಿ­ಸಿದ್ದು, ಪ್ರಭಾಕರ್‌.ಎಸ್.ಎಂ. ಸಹಾ­ಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿ­ಸಿ­ದ್ದಾರೆ. ಮಲ್ಲಿಕಾರ್ಜುನ ಅವರ ಸಂಭಾಷಣೆ ಕಿರುಚಿತ್ರಕ್ಕೆ ತಕ್ಕುದಾಗಿದೆ.
‘ದೇಸೀಯತೆ ಸಾರುವ ಉದ್ದೇಶ­ದಿಂದ ಕಿರುಚಿತ್ರ ನಿರ್ಮಿಸಲಾಗಿದೆ. ಯಾವುದೇ ವಾಣಿಜ್ಯದ ಉದ್ದೇಶದ ಇಲ್ಲ. ಮಕ್ಕಳ ಸೃಜನಶೀಲತೆ ಹೆಚ್ಚಿಸುವ ಉದ್ದೇಶದಿಂದ ಮಕ್ಕಳೇ ಅಭಿನಯಿಸಿ­ರುವ ಈ ಚಿತ್ರವನ್ನು ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಪ್ರದ­ರ್ಶನಕ್ಕೆ ಅವಕಾಶ ನೀಡಬೇಕು’ ಇನ್ನೊಬ್ಬ ನಿರ್ದೇಶಕ ಕರಣ್‌ ಮನವಿ ಮಾಡುತ್ತಾರೆ.